Cyclone Montha Effect: ಚಂಡಮಾರುತದ ಎಫೆಕ್ಟ್; ವಿಮಾನ ರದ್ದು, ಬೆಂಗಳೂರಿನ ರೈಲುಗಳ ಓಡಾಟದಲ್ಲೂ ವ್ಯತ್ಯಯ

ಬೆಂಗಳೂರು (ಅ.28): ಮೊಂತಾ ಚಂಡಮಾರುತದ ಪರಿಣಾಮದಿಂದ (Cyclone Montha Effect) ಕರ್ನಾಟಕದಲ್ಲೂ ಭಾರೀ ಮಳೆಯಾಗ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತ (Cyclone Montha) ಅಪ್ಪಳಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಕರ್ನಾಟಕದಲ್ಲಿ ಮಳೆ ಜೋರಾಗಿದೆ. ಇದರ ನಡುವೆ ಚಂಡಮಾರುತದಿಂದಾಗಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಸಂಚಾರದಲ್ಲೂ (Flight Traffic) ವ್ಯತ್ಯಯ ಉಂಟಾಗಲಿದೆ. ಬೆಂಗಳೂರಲ್ಲಿ ಯಾವ, ಯಾವ ರೈಲುಗಳು ರದ್ದಾಗಿದೆ. ಸಂಚಾರದಲ್ಲಿ ಎಷ್ಟು ಗಂಟೆಗಳ ಕಾಲ ವ್ಯತ್ಯಯ ಉಂಟಾಗಲಿದೆ ಎನ್ನುವ ವಿವರ ಇಲ್ಲಿದೆ.
ವಿಮಾನ, ರೈಲು ಸಂಚಾರ ಬಂದ್
ವಿಜಯವಾಡದಲ್ಲಿ ಏರ್ ಇಂಡಿಯಾ ವಿಮಾನ ಕೂಡ ರದ್ದಾಗಿದೆ. ಇಂಡಿಗೋ ವಿಮಾನ ಕೂಡ ಹವಾಮಾನವನ್ನು ನೋಡಿಕೊಂಡು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ವಿಶಾಖಪಟ್ಟಣಂನಿಂದ ಬರುವ ಎಲ್ಲಾ ವಿಮಾನ ಕೂಡ ರದ್ದು ಮಾಡಲಾಗಿದೆ. ಇದರ ನಡುವೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು 12 ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ.
12 ಗಂಟೆಗಳ ಕಾಲ ವಿಳಂಬ
ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆ ದಕ್ಷಿಣ ಮಧ್ಯ ರೈಲ್ವೆಯಿಂದ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದೆ. ಇಂದು ಬೆಂಗಳೂರಿನ ರೈಲುಗಳು ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
